Thursday, December 30, 2010

ಕನ್ನಡದಲ್ಲಿ Object Oriented Programming

ನಾನು ಮಾಡುವ ಕೆಲಸದಲ್ಲಿ Object Oriented Programming ಸಾಕಷ್ಟು ಬಳಸುವುದರಿಂದ ಕನ್ನಡದಲ್ಲಿ ಇದನ್ನು ಏನಂತ ಕರಿಬಹುದು ಅಂತ ಆರಯ್ಯುತ್ತಿದ್ದೆ, ಅಂದ್ರೆ ಯೋಚಿಸ್ತಾ ಇದ್ದೆ. Programming ಅನ್ನೋದಕ್ಕೆ ಆಗಲೇ ಹಮ್ಮುಗೆ ಅನ್ನೋ ಪದ ಇದೆ. Orientedಗೆ ಏನೋ ಒಂದು ಹುಡುಕಬಹುದು. ಆದರೆ Objectಗೆ ಕನ್ನಡದಲ್ಲಿ ಯಾವ ಪದ ಇದೆ?

ಹೆಚ್ಚು ಕಡಿಮೆ ಎಲ್ಲರು 'ವಸ್ತು' ಅನ್ನೋ ಸಕ್ಕದ ಪದವನ್ನ ಬಳಸ್ತೀವಿ. ಆದರೆ ಅಚ್ಚಗನ್ನಡದ್ದು? ಕೊಂಚ ಯೋಚನೆ ಮಾಡಿದೆ, ಆಮೇಲೆ ಪದನೆರಕೆಗಳಲ್ಲಿ ಹುಡುಕೋದಕ್ಕೆ ತೊಡಗಿದೆ. ಎಷ್ಟೋ ಹುಡುಕಿದ ಮೇಲೆ ಸಿಕ್ಕಿದ ಪದ - ಸರಕು. ಈ ಪದಕ್ಕೆ goods, merchandise ಎಂಬ ಅರ್ತ ಬರುವಂತೆ ಕನ್ನಡದಲ್ಲಿ ಬಳಸ್ತೀವೇ ಹೊರತು object ಎಂಬ ಅರ್ತದಲ್ಲಿ ಅಲ್ಲ.

ಹಾಗೇ ಸುಮಾರು ಹುಡುಕಿದ್ ಮೇಲೆ ಇನ್ನೊಂದು ಪದ 'ಹುರುಳು/ಪುರುಳು' ಅಂತ ಸಿಕ್ಕಿತು. ಇದು ಸಿರಿ, ಸಂಪತ್ತು, ದ್ರವ್ಯ ಅನ್ನೋ ಅರ್ತದಲ್ಲಿ ಬಳಕೆಯಾಗುತ್ತೆ.

ನಾವು ಹೊರ ಪ್ರಪಂಚದಲ್ಲಿ ಎಲ್ಲವನ್ನೂ ನೋಡುವುದು Objectಗಳಾಗಿಯೇ. ಅದಕ್ಕಾಗಿಯೇ ಮೊರೆಹಮ್ಮುಗೆ (procedural programming)ಯನ್ನು ತಿದ್ದಿ OOPಯನ್ನು ನಾವು ಹಮ್ಮುಗ(programmer)ರು ಕಂಡು ಕೊಂಡಿರೋದು. ನಾವು ಹಮ್ಮುವ ಬಗೆಯು, ನಾವು ಹೊರಪ್ರಪಂಚವನ್ನು ನೋಡುವ ಬಗೆಗೆ ಹೊಂದುಕೊಂಡರೆ ಹಮ್ಮುಗೆಯು ಸುಳುವಾಗುತ್ತೆ ಅಂತ. Object ಅನ್ನೋ ಇಂತಹ ಒಂದು ಸರಳವಾದ, ಸುಳುವಾದ, ಪರಿಕಲ್ಪನೆಗೆ ಕನ್ನಡದಲ್ಲಿ ಪದವೇ ಇಲ್ಲವಲ್ಲ, ಇದ್ದರೂ ಸಿಗದೇ ಇರೋ ಅಷ್ಟು ದಿನಬಳಕೆಯಲ್ಲಿ ಕಣ್ಮರೆಯಾಗಿದ್ಯಲ್ಲ ಅಂತ ಅಚ್ಚರಿಯಾಯಿತು. ಇರಲಿ, ಈಗ ನಾನು 'ಸರಕು' ಅನ್ನೋ ಪದವನ್ನೇ ಬಳಸೋಣ ಅಂತ ತೀರ್ಮಾನಿಸಿದ್ದೀನಿ. ನಿಮಗೆ ಇನ್ನೂ ಒಳ್ಳೆ ಪದ ಹೊಳೆದರೆ/ ಸಿಕ್ಕರೆ ನನಗೆ ತಿಳಿಸಿ.

ಹಾಗಾದರೆ ಈಗ 'Oriented' ಅನ್ನೋದನ್ನ ಏನಂತ ಹೇಳೋದು? Objet Oriented Programmingನಲ್ಲಿ, ಮೊರೆಹಮ್ಮುಗೆ(Procedural Programming)ಯಲ್ಲಿನಂತೆ, ಒಂದು ಹಮ್ಮನ್ನು (program) ಒಂದು ಕೆಲಸಗಳ ಇಲ್ಲವೇ ಎಸಕಗಳ ಸರಣಿ ಎಂದು ಬಾವಿಸದೆ ಸರಕು(Object)ಗಳ ಒಡನಾಟ(collaboration)ಗಳೆಂದು ಬಾವಿಸ ಬೇಕು. ಅಂದ್ರೆ ಹಮ್ಮುಗನಿಗೆ ಆ object ಬಾವನೆ ಇಲ್ಲವೇ ಸರಕು-ಬಾವನೆ ಬೇಕು. ಕನ್ನಡಲ್ಲಿ ಬಾವನೆಗೆ ಸರಿ ಹೊಂದೋ ಪದ 'ಉನ್ನು' ಅಂತ ನನಗೆ ಅನಿಸುತ್ತೆ. ಹಾಗಾಗಿ ನಾವು OOPಯನ್ನು 'ಸರಕುನ್ನುವ ಹಮ್ಮುಗೆ'ಅಂತ ಹೇಳಬಹುದು.

'ಉನ್ನು'(ಭಾವಿಸು) ಎಂಬುದು ಎಸಕಪದವಾದ್ದರಿಂದ 'ಸರಕುನ್ನು' (ಸರಕು + ಉನ್ನು) ಕೂಡ ಎಸಕಪದವೇ. ಶಂಕರ ಬಟ್ಟರು, ತಮ್ಮ ಒಂದು ಹೊತ್ತಗೆಯಲ್ಲಿ ಹೇಳುವಂತೆ, 'ಹಮ್ಮುಗೆ' ಅನ್ನೋ ಹೆಸರು ಪದದ ಮೊದಲು 'ಸರಕುನ್ನು' ಅನ್ನೋ ಎಸಕ ಪದ ಅದರ adjectiveಆಗಿ ಬರಬಹುದು. ಶಂಕರ ಬಟ್ಟರದೇ ಕೆಲವು (ಎಸಕಪದ + ಹೆಸರುಪದ) ಎತ್ತುಗೆಗಳನ್ನು ನೋಡಿ: ಸುರಿಮಳೆ, ಹುಟ್ಟುಹಬ್ಬ, ಊರುಗೋಲು, ಬೀಸುಗಲ್ಲು. ಹಾಗಾಗಿ ಇದನ್ನು ಎರಡು ಬಿಡಿಪದಗಳಾಗಿ ಹೇಳುವು ಬದಲು ಒಂದು ಜೋಡುಪದವಾಗಿ 'ಸರಕುನ್ನುಹಮ್ಮುಗೆ' ಅಂತ ಹೇಳಬಹುದು.

ಸರಕುನ್ನು = ಸರಕು + ಉನ್ನು

Object Oriented Programming = ಸರಕುನ್ನುಹಮ್ಮುಗೆ = ಸರಕುನ್ನು + ಹಮ್ಮುಗೆ  


Object Orientation = ಸರಕುನ್ನಿಕೆ 

4 comments:

Shanta Shastri said...

any language grows by adding other language terms to itself. Engligh dictionaries add new words from other languages from time to time. Words like Karma, Yoga, Nirvana are very much used in daytoday life in Western countries now.

I see you do not wish to use even sanskrit words? Like "ShabdaKosh" for dictionary. "PadaNerake" is never used - i had never heard it. It is not easy to use and people will not use it how much ever you publicize.

I think this initiative lacks some insight and observation about how a language survives or grows. So what i want to tell you is, "Eravalu pada" is alright for a language, as long as grammatical structure and script(lipi) are preserved and used

Sandeep Kambi said...

@seeds of thoughts ಒಂದು ನುಡಿ ಎಲ್ಲ ಆಯಾಮಗಳಲ್ಲೂ ಬೆಳೆಯಬೇಕು. ಹೇಗೆ ಹೊರಗಿಂದ ಪದಗಳನ್ನು ಪಡೆಯಬೇಕೋ ಹಾಗೆ ಸ್ವಂತಿಕೆಯನ್ನೂ ಕಂಡು ಕೊಳ್ಳಬೇಕು ಮತ್ತು ಅದರಿಂದ ಬೇರೆ ನುಡಿಗಳಿಗೂ ಕೊಡಬೇಕು. ಇದನ್ನೇ ಮಾಡಬೇಕು ಇನ್ನೊಂದನ್ನು ಮಾಡಬಾರದು ಅಂತ ನಮ್ಮ ಸುತ್ತ ಕೋಟೆ ಕಟ್ಟಿಕೋ ಬಾರದು. ಹೇಗೆ 'ಪದಕೋಶ' ಇದೆಯೋ ಹಾಗೆ 'ಪದನೆರಕೆ' ಬಂದರೆ ನಮಗೆ ಇನ್ನೂ ಒಳ್ಳೆಯದಲ್ಲವೇ?

Deepak Rao said...

@seeds of thought,
ಒಂದು ಹೊಸ ಪದ ಯಾವುದೇ ನುಡಿಗೆ ಮೊದಲು ಸೇರಿದಾಗ ಆ ನುಡಿಯನ್ನು ಮಾತನಾಡುವರು ಅದ್ದನ್ನು ಅರಿಯಬೇಕಾಗುತ್ತೆ. ನಮ್ಮ ಚಿಕ್ಕಂದಿಂದಲೆ ನಾವು ಹೊಸ ಪದಗಳನ್ನು ಕಲಿಯುವುದಿಲ್ವಾ ? ಒಂದು ಉದಾಹರಣೆ, ಕೆಲವು ದಿನದ ಹಿಂದೆ " ಮಿಂಚೆ ", " ಮಿಂಚಂಚೆ " ಕನ್ನಡ ನುಡಿಗೆ ಸೇರಿತು. ಈಗ ಅದು ವಿಜಯ ಕರ್ನಾಟಕದಲ್ಲೂ ಕೂಡ ಬಳಕೆ ಆಗಿದೆ. ಒಂದು ಪದ ಕೇಳಿಲ್ಲ ಅಂದರೆ ಅದ್ದನ್ನು ಕಲಿಯುವುದರಲ್ಲಿ ಯಾವ ತಪ್ಪಿಲ್ಲ. ಕೆಲಸ ಮಾಡುವರಿಗೆ ಒಳ್ಳೆ ಮಾತನ್ನು ಹೇಳ ಬದಲು ಈ ರೀತಿ ಮಾತನ್ನು ಆಡಬೇಡಿ. ಯಾಕೆಂದರೆ ಕೊನೆಗೆ ಯಾವುದೇ ಪದವನ್ನು ಮನುಷ್ಯರೇ ಹುಟ್ಟು ಹಾಕಬೇಕು.

Sarvesh Rao said...

" any language grows by adding other language terms to itself."

- ನಿಮ್ಮ ಮಾತುಗಳನ್ನು ಕೊಂಚ ಗಮನಿಸಿ. ಬೇರೆ ನುಡಿಯ ಪದಗಳನ್ನು ಸೇರಿಸಬೇಕಾದರೆ ಆ ನುಡಿಯಲ್ಲಿ ಪದ ಕಟ್ಟಿರುವ ಕೆಲಸ ನಡೆದಿದೆ ಅಲ್ವಾ ? ಇಲ್ಲದಿದ್ದರೆ ಆ ಪದದ ಎರವಲು ನಡೆಯುವುದಕ್ಕೆ ಆಗುವುದಿಲ್ಲ. ಯಾಕೆ ನಮ್ಮ ನುಡಿಯಲ್ಲಿ ಆ ಕೆಲಸ ನಡೆಯಬಾರದು ?

" I think this initiative lacks some insight and observation about how a language survives or grows."

- ಇದು ಬರಿ ನಿಮ್ಮ ಯೋಚನೆ ಯಾಕೆಂದರೆ " I Think " ಅಂತ ಹೇಳಿದ್ದೀರಿ ಅಲ್ವಾ ? ಎಲ್ಲರೂ ಕೂಡ ಇದಕ್ಕೆ ಒಮ್ಮತ ನೀಡಬೇಕು ಅಂತ ಏನು ಇಲ್ಲ. ಒಂದು ನುಡಿಗೆ ಬರಿ ಬೇರೆ ನುಡಿಯ ಎರವಲು ಪದಗಳು ಸಾಲುವುದಿಲ್ಲ.