Tuesday, May 20, 2008

ಕಡತ ಸಾಗಣೆ ಒಡಂಬಡಿಕೆ - ೨

ಅಂಕೆಯ ಕಾಲುವೆ (data channel) ಏನೋ ೨೧ನೇ ರೇವಿನಲ್ಲಿ (port) ಏರ್ಪಡುತ್ತದೆ. ಆದರೆ ಮಾಹಿತಿ ಸಾಗಣೆ (data transfer) ಆಗುವುದು ಯಾವ ರೇವಲ್ಲಿ? ೨೦ನೇಯದು?
ಹವ್ದು. ೨೦ನೇ ರೇವು ಸರಿಯೇ. ಆದರೆ ಯಾವಾಗಲೂ ಅಲ್ಲ.

ಹಾಗಾದರೆ ೨೦ನೇ ರೇವಲ್ಲಿ ಮಾಹಿತಿ ಸಾಗಣೆ ಆಗೋದು ಯಾವಾಗ? ಹೇಗೆ?
ಕಸಾಒ (ಕಡತ ಸಾಗಣೆ ಒಡಂಬಡಿಕೆ - FTP) ಚುರುಕಾದಾಗ (active). ತೂಕಡಿಸುವಾಗ ಬೇರೆ ರೇವಲ್ಲಿ ಆಗುತ್ತದೆ.

"ಆಆಆ? ಏನ್ ಸಿವ ಇದು ಚುರುಕು; ತೂಕಡಿಸೋದು" ಅಂದ್ಕೊಂಡ್ರಾ? ಹೇಳ್ತೀನಿ. 'ಕಸಾಒ'ದಲ್ಲಿ ಎರಡು ಬಗೆ. ಚುರುಕು ಕಸಾಒ (active FTP) ಮತ್ತು ತೂಗು ಕಸಾಒ (passive FTP). ತೂಗು ಅನ್ನೋ ಪದ ಯಾಕೆ ಅಂದ್ರೆ ಊಳಿಗಿಯು (server) ತೂಕಡಿಸುತ್ತ, ಕೊಳ್ವನೇ (client) ಸಿಲುಕನ್ನು (connection) ತೊಡಗಿಸಲೆಂದು ಕಾಯುತ್ತ ಕೂರುತ್ತದೆ. ಚುರುಕು-ತೂಗು, ಈ ಪದಗಳು ಇಷ್ಟ ಆಗ್ತಿಲ್ವಾ? ಏನ್ ಮಾಡ್ಲಿ ನನಗೆ ಹೊಳೆದಿದ್ದೇ ಇವು. ಬೇರೆ ಸೂಕ್ತವಾದ ಪದಗಳು ಸಿಕ್ಕರೆ ಕಾಮೆಂಟ್ ಹಾಕಿ ತಿಳಿಸಿದರೆ ಉಪಕಾರ ಆಗುತ್ತೆ. ಸರಿ, ಅಲ್ಲಿಯವರೆಗೂ ಇವೇ ಪದಗಳನ್ನು ಬಳಸುತ್ತೇನೆ.

ಚುರುಕು ಬಗೆ ( active mode)
--------------------------

ಮೊದಲೇ ಹೇಳಿದಂತೆ, ಈ ಬಗೆಯಲ್ಲಿ, ಊಳಿಗಿಯು ಚುರುಕಾಗಿ ಸಿಲುಕು ಏರ್ಪಾಟಲ್ಲಿ ( connection establishment) ತೊಡಗಬೇಕು. ಇದಕ್ಕೆ ಮೊದಲು ಕೊಳ್ವನು "PORT N" ಎಂಬ ಅಪ್ಪಣೆಯನ್ನು ಕೊಟ್ಟು 'ನಾನು Nನೇ ರೇವಿನಲ್ಲಿ ನಿನಗಾಗಿ ಕಾಯುತ್ತಿರುತ್ತೇನೆ" ಎಂದು ಊಳಿಗಿಗೆ ತಿಳಿಸುತ್ತದೆ. N ಒಂದು ಮೀಸಲಲ್ಲದ ರೇವಾಗಿರುತ್ತದೆ (non-reserved port). ಅಪ್ಪಣೆ ಕೊಟ್ಟ ಕೂಡಲೇ, ಕೊಳ್ವನು , ಆ N ರೇವಿನಲ್ಲಿ ಕಿವಿಗೊಟ್ಟು ಕೂರುತ್ತದೆ. ಊಳಿಗಿಯು ಆಗ ತನ್ನ ಕಡೆಯ 20ನೇ ರೇವಿನಿಂದ ಕೊಳ್ವನ ಕಡೆಯ Nನೇ ರೇವಿಗೆ ಸಿಲುಕಿಸಲು ಯತ್ನಿಸುತ್ತದೆ. ಕೊಳ್ವನು ಈ ಸಿಲುಕಿನ ಕೋರಿಕೆ (connection request)ಯನ್ನು ಸ್ವೀಕರಿಸಿದರೆ ಸಿಲುಕು ಅಣಿ! ಓದು-ಬರೆ ಕರೆಗಳ ( read-write calls) ಮೂಲಕ ಮಾಹಿತಿಯು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಹುದು.
ಮಾಹಿತಿ ಸಾಗಣೆ (data transfer) ಆದ ಕೂಡಲೇ ಸಿಲುಕನ್ನು ಮುಚ್ಚಲಾಗುತ್ತದೆ. ಇಲ್ಲೂ ಊಳಿಗಿಯು ಚುರುಕಾಗಿರ ಬೇಕು. ಹಾಗಾಗಿ ಸಿಲುಕು ಮುಚ್ಚೋ ಕೆಲ್ಸ ಕೂಡ ಅದೇ ಮಾಡಬೇಕು.

ತೂಗು ಬಗೆ (passive mode):
--------------------------

ಮಾಹಿತಿ ಸಾಗಿಸಬೇಕಾದಾಗ, ಈ ಬಗೆಯಲ್ಲಿ, ಕೊಳ್ವನು ಅಂಕೆ ಕಾಲುವೆಯ ಮೂಲಕ 'PASV' ಎಂಬ ಅಪ್ಪಣೆಯನ್ನು ಕಳುಹಿಸಿ ನೀನು ತೂಗು (passive) ಬಗೆಯಲ್ಲಿರು ಎನ್ನುತ್ತದೆ. ಊಳಿಗಿಯು ಆಗ M ಅನ್ನೋ ಊ (random) ರೇವನ್ನು ತೆರೆದು, "PORT M" ಎಂಬ ಅಪ್ಪಣೆಯನ್ನು ಕೊಳ್ವನಿಗೆ ಕಳುಹಿಸುತ್ತದೆ. ಈ M ರೇವು ಮೀಸಲಲ್ಲದ (non-reserved) ರೇವಾಗಿರುತ್ತದೆ. ಈ ಅಪ್ಪಣೆಯನ್ನು ಪಡೆದಾಗ, ಕೊಳ್ವನು ಸಿಲುಕನ್ನು ಊಳಿಗಿಯ M ರೇವಿನೊಂದಿಗೆ ಏರ್ಪಡಿಸುತ್ತದೆ. ಎಂದಿನಂತೆ ಈಗ ಮಾಹಿತಿ ಸಿಲುಕು ಅಣಿ. ಓದು-ಬರೆ ಕರೆಗಳು ನಡೆದು ಮಾಹಿತಿ ಸಾಗಣೆ ಮುಗಿದ ಮೇಲೆ ಕೊಳ್ವನು ಈ ಸಿಲುಕನ್ನು ಮುಚ್ಚತ್ತದೆ. ಅಷ್ಟೇ!

ಎಲ್ಲಾ ಓಕೆ. ಆದರೆ ಈ ಎರಡು ಬಗೆ ಯಾಕೆ? ಒಂದೇ ಇದ್ದಿದ್ದರೆ ಇನ್ನೂ ಸಲೀಸಾಗ್ತಿರಲಿಲ್ವಾ?

ದಿಟ. ಆದರೆ ಕಿಚ್ಚು ಗೋಡೆ ಗೊತ್ತುಣ್ಟಾ? ಅಂದರೆ ಇಂಗಲೀಷಿನಲ್ಲಿ firewall. ಇದರಿಂದ ಕೆಲವು ತೊಂದರೆಗಳುಣ್ಟಾಗ್ತವೆ. ಅದಕ್ಕೆ ಈ ಎರಡು ಬಗೆಗಳು.

ತೊಂದರೆ ಏನು, ಈ ಎರಡು ಬಗೆಗಳಿಂದ ಹೇಗೆ ಅದು ಬಗೆಹರಿಯುತ್ತೆ ಅಂತ ಮುಂದಿನ ಕಂತಲ್ಲಿ ತಿಳಿಸ್ತೀನಿ. ಕಾಯ್ತಿರಿ. ಆದರೆ ಅಲ್ಲಿಯವರೆಗೆ ತೂಗು ಬಗೆಯಲ್ಲಿ ಕೂರುವುದು ಬೇಡ. ಚುರುಕಾಗಿ ಓದಿ, ಹೇಗನ್ನಿಸ್ತು ಅಂತ ಹೇಳಿ, ತಪ್ಪಿದ್ದರೆ ತಿದ್ದಿ, ಅನುಮಾನಗಳಿದ್ದರೆ ಕೇಳಿ. ದಂಡಿಯಾಗಿ ಕಾಮೆಣ್ಟ್ ಮಾಡಿ.

Sunday, May 18, 2008

ಕನ್ನಡದಲ್ಲಿ ಟೆಕ್ ಬರಹಗಳು

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಲು
ತಕ್ಕನೆ ಮನಮಯ್ ಮರೆಯುವುದು.

ಬಲೆಯಲ್ಲಿ ಕನ್ನಡದ ಬಳಕೆ ಏರುತ್ತಿರುವುದು ನೋಡಿದರೆ ಮನಸ್ಸಿಗೆ ಬಹಳ ಹಿಗ್ಗು. ಈಗ ಮೂಡುತ್ತಿರುವ ಕನ್ನಡ ತಾಣಗಳು, ದನಿ ತಾಣಗಳು, ಬ್ಲಾಗುದಾಣಗಳು ಹಲವು. ಇವುಗಳಲ್ಲಿ ಹಲವು, ಕನ್ನಡದ ಬಗ್ಗೆ ಆಲೋಚನೆ ನಡೆಸುವುದು, ಮುಂದಿನ ದಾರಿಯ ಬಗ್ಗೆ ಮಾತುಕತೆ ಮಾಡುವುದು ಬಹಳ ಖುಷಿ ತರುವ ವಿಷಯ. ಕನ್ನಡದ ಬಗೆಗಿನ ಕಳಕಳಿ ಈಗ ಸಾಮಾನ್ಯ (ಬಲೆಗಾರ)ನಲ್ಲೂ ಮೂಡಿದೆ. ಆದರೆ ಬಲೆಯ ಲೋಕದಲ್ಲಿ ನಾವು ನಮ್ಮ ನೆರೆಯ ನುಡಿಗಳಾದ ತಮಿಳು, ತೆಲುಗು, ಮಲಯಾಳಗಳಿಂದ ಬಹಳ ಹಿಂದು ಬಿದ್ದಿದ್ದೇವೆ. ಪುರಾವೆಗೆ www.google.com/trends ತಾಣಕ್ಕೆ ಹೋಗಿ ‘kannada, tamil, telugu, malayalam' ಗಳ ಟ್ರೆಂಡ್ಸ್ ಹುಡುಕಿ. ಕನ್ನಡ ಎಂಬ ಕೀಲಿಪದದ ಹುಡುಕಾಟದ ಸಂಖ್ಯೆ ಎಲ್ಲ ನುಡಿಗಳಿಗಿಂತ ಕಡಿಮೆ. ಹಲವು ಪಟ್ಟು ಕಡಿಮೆ. ಹಾಗೆಯೆ ವಿಕಿಪೀಡಿಯ ಇಲ್ಲವೇ ವಿಕ್ಷನರಿಗೆ ಹೋಗಿ ಕನ್ನಡದಲ್ಲಿರುವ ಎಣ್ಟ್ರಿಗಳನ್ನು ಎಣಿಸಿ ನೋಡಿ. ಹ್ಮ್ಮ್ಮ್ಮ್...... ಅವೂ ಬಹಳ ಕಡಿಮೆ :-(

ಹಿಂದೆ ಉಳಿದಿದ್ದೇವೆ ಎಂಬ ನೋವು ಇದೆ, ಆದರೆ ಮುನ್ನುಗ್ಗಿ ಎಲ್ಲರನ್ನೂ ಹಿಂದೂಡಿ ಬಿಡುವ ಹಂಬಲ ನಮ್ಮಲ್ಲಿದೆ. ಅದಾಗುತ್ತದೋ ಇಲ್ಲವೋ ನಮಗೆ ತಿಳಿಯದು. ಆದರೆ ಸದ್ಯಕ್ಕೆ ನಾವು ಮುನ್ನುಗ್ಗುತ್ತಿದ್ದೇವೆ. ಇದು ದಿಟವಾಗಿಯೂ ಹಿಗ್ಗಿನ ವಿಷಯ :-).

ಕನ್ನಡದಲ್ಲಿ ಸಾಹಿತ್ಯ, ಸುದ್ದಿ-ಸಮಾಚಾರ, ಸಂಗೀತ, ಸಿನಿಮಾ ಹೀಗೆ ಹಲವು ವಿಷಯಗಳ ಬಗ್ಗೆ ತಾಣಗಳು ಮೂಡಿಬಂದಿವೆ. ಆದರೆ, ಟೆಕ್ ಬರಹಗಳಾಗಲಿ, ವಿಜ್ನಾನದ ಬರಹಗಳಾಗಲಿ ನನಗೆ ತಿಳಿದ ಮಟ್ಟಿಗೆ ಮೂಡಿ ಬಂದಿಲ್ಲ. ಆದರೆ ಈ ವಿಷಯಗಳ ಬಗ್ಗೆ ಅಚ್ಚು (print) ಮಾಧ್ಯಮದಲ್ಲಿ ಸಾಕಷ್ಟು ಬರಹಗಳು ಬಂದಿವೆ. ಆದರೆ ಇವು ಸಾಮಾನ್ಯ ಜನರಿಗಾಗಿ ಬರೆದ ವಿಜ್ನಾನವೇ ಹೊರತು ಈ ಎಡೆಯಲ್ಲಿ ಗಂಭೀರ ಬರಹಗಳು ಬಂದಿಲ್ಲ. ಅಂದರೆ, ಪಠ್ಯ ಸಾಹಿತ್ಯ ಇಲ್ಲ. ಉದಋಣೆಗೆ, ಕನ್ನಡದಲ್ಲಿ ವಯ್ದ್ಯಕೀಯ ವಿಜ್ನಾನಕ್ಕೆ ಯಾವ ಪಠ್ಯ ಸಾಹಿತ್ಯವೂ ಇಲ್ಲ. ಅದಿರಲಿ ವಯ್ದ್ಯಕೀಯ ರಂಗದಲ್ಲಿ ಬಳಸುವ ಮೂಲ ಪದಗಳಿಗೇ ಕನ್ನಡದಲ್ಲಿ ಸಮಾನಾರ್ಥಕಗಳಿಲ್ಲ. ಈ ಸಾಹಿತ್ಯದಲ್ಲಿ ಇನ್ನೊಂದು ತೊಡಕೆಂದರೆ ಎರ್ರಾಬಿರ್ರಿ ಸಕ್ಕದದ ಬೆರೆಕೆ. ನಮ್ಮ ವಿಜ್ನಾನ ಸಾಹಿತಿಗಳು ಒಂದೊಂದು ಪಾರಿಭಾಷಿಕ ಪದಗಳಿಗೂ ಸಕ್ಕದದ ಮೊರೆ ಹೋಗಿ, ಸಾಕಪ್ಪಾ ಸಾಕು, ಕನ್ನಡದಲ್ಲಿ ವಿಜ್ನಾನವೇ ಬೇಡ ಎನುವಷ್ಟರ ಮಟ್ಟಿಗೆ ಕಷ್ಟಗೊಳಿಸಿದ್ದಾರೆ. ತುಸು ದಿನಗಳ ಹಿಂದೆ ಬಲೆಯಲ್ಲಿ ‘chlorphyl' ಉದಾಹರಣೆಯನ್ನು ಓದಿದ್ದೆ. ನೀವೂ ಇದರ ಬಗ್ಗೆ ಓದಿರುತ್ತೀರಿ. 'ಪತ್ರಹರಿತ್ತು' ಅಂತ ಹೇಳಿ ತಲೆಮೇಲೆ ಹೋಗೋ ಹಾಗೆ ಮಾಡಿದ್ದಾರೆ. ಅದರ್ ಬದಲಾಗಿ 'ಎಲೆಹಸಿರು' ಅಂತ ಕರೆದಿದ್ದರೆ ಎಷ್ಟು ಚೆನ್ನ!

ಕನ್ನಡದಲ್ಲಿ ಎಲ್ಲಾ ವಿಜ್ನಾನ ತಂತ್ರಜ್ನಾನಕ್ಕೆ ನಂಟಾದ ಸಾಹಿತ್ಯ ಬರಬೇಕು. ಇದು ಸರಳವಾಗಿರಬೇಕು, ಆದಷ್ಟು ಸಕ್ಕದದ ಬದಲಾಗಿ ಕನ್ನಡದ ಪದಗಳನ್ನು ಬಳಸಬೇಕು, ಮತ್ತು ಇದು ನಮ್ಮ ನಾಡ professionalಗಳು ಬಳಸುವಂತಾಗಬೇಕು. ರಸಾಯನ ಶಾಸ್ತ್ರ ಓದುವವರು ಕನ್ನಡದಲ್ಲಿ ರಸಾಯನಗಳ ಫಾರ್ಮುಲಾಗಳನ್ನು ಬರೆದು ಬಳಸಬೇಕು. ನಮ್ಮಂತಹ ಸಾಫ್ಟ್ವೇರ್ ಇಂಜಿನಿಯರ್ಗಳು ಕನ್ನಡದ ಪ್ರೋಗ್ರಾಮಿಂಗ್ ನುಡಿಗಳಲ್ಲಿ ಪ್ರೋಗ್ರಾಮ್ ಬರೆಯುವಂತಾಗಬೇಕು. ವಯ್ದ್ಯನ ಬಳಿ ಹೋದರೆ ಕನ್ನಡದಲ್ಲಿ prescription ಕೊಡಬೇಕು. ಪೇಟೆಂಟ್ ಫಯ್ಲ್ ಮಾಡುವವರು ತಮ್ಮ ಓಲೆ (paper)ಯನ್ನು ಕನ್ನಡದಲ್ಲಿ ಬರೆದು ಸಲ್ಲಿಸಬೇಕು........
ಕನ್ನಡವೆಂದರೆ ಬರಿಯ ಕತೆ ಕವನದ ಸಾಹಿತ್ಯವಾಗಿರದೆ, ವಿಜ್ನಾನ, ತಂತ್ರಜ್ನಾನ, ಎಣ್ಮೆಗಳ ಸಾಹಿತ್ಯವೂ ಆಗಬೇಕು. ನಮ್ಮ ಹಿರಿಯರು ನಮಗೆ ಕತೆ ಕವನದ ಸಾಹಿತ್ಯ ಸಾಕಷ್ಟು ಕೊಟ್ಟಿದ್ದಾರೆ. ಆದರೆ ಇದನ್ನು ಈಗ ಬೆಳೆಯುತ್ತಿರುವ ಬೇರೆ ಕ್ಷೇತ್ರಗಳಿಗೂ ಎಳೆದು ನಮ್ಮ ನುಡಿಯನ್ನು ಬೆಳೆಸಿ ಕಂಗೊಳಿಸುವಂತಹ ಸ್ಥಿತಿಗೆ ತರುವುದು ನಮ್ಮ ಪೀಳಿಗೆಯ ಹೊಣೆಗಾರಿಕೆ.
ಕನಸುಗಳೇನೋ ಸಾಕಷ್ಟಿವೆ, ಅದು ನನಸಾಗುವವೇ ಎಂಬುದು ನಮ್ಮ ಕಯ್ಯಲ್ಲಿಯೇ ಇದೆ.

ಸರಿ. ಇನ್ನು ನನ್ನ ಪೀಠಿಕೆ ಸಾಕು ಅನ್ನಿಸುತ್ತೆ. ಈಗಾಗಲೇ ನಿಮಗೆ ಅರ್ಥ ಆಗಿರಬೇಕು. ನಾನೇನು ಪೊಡವಿಯಲ್ಲಿರುವ ಎಲ್ಲ ವಿಜ್ನಾನಗಳನ್ನು ಕನ್ನಡ ಸಾಹಿತ್ಯದಲ್ಲಿ ತರುವ ಸಾಹಸಕ್ಕೆ ಸದ್ಯಕ್ಕೆ ಕಯ್ ಹಾಕಿಲ್ಲ. ಆದರೆ, ನನ್ನ ಒಂದು ಸಣ್ಣ ಅಳಿಲು ಸೇವೆಯಲ್ಲಿ ತೊಡಗೋಣ ಅಂತ. ನಾನೊಬ್ಬ ಸಾಫ್ಟ್ ವೇರ್ ಇಂಜಿನಿಯರ್. ನನಗೆ ತಿಳಿದಿರುವ ಕೆಲವು ಕಂಪ್ಯೂಟರ್-ಸಾಫ್ಟ್ವೇರ್ ವಿಷಯಗಳನ್ನು ಕನ್ನಡದಲ್ಲಿ ಬರೆದು ಈ ಬ್ಲಾಗಿನಲ್ಲಿ ಹಾಕುವೆ. ಪ್ರತಿ ಬ್ಲಾಗ್ ಬರಹದ ಕೆಳಗೆ ನಾನು ಬಳಸಿರುವ ಕನ್ನಡ ಪಾರಿಭಾಷಿಕ ಪದಗಳ 'ಪದತಿಳಿವು' (glossary) ಕೊಡುವೆ. ನಾನು ಬಳಸಿರುವ ಪದ (ಪದಗಟ್ಟು) ನಿಮಗೆ ಸೂಕ್ತವಲ್ಲ ಎನಿಸಿದರೆ ಕಾಮೆಂಟ್ ಹಾಕಿ ನನಗೆ ತಿಳಿಸಲು ಹಿಂಜರಿಯದಿರಿ. ದಯವಿಟ್ಟು!

ನನ್ನ ಕನ್ನಡ ಟೆಕ್ ಬರಹಗಳನ್ನು ನನಗೆ ಇಷ್ಟವಾದ 'ಕಡತ ಸಾಗಣೆ ಒಡಂಬಡಿಕೆ' (File Transfer Protocol) ಎಂಬ ಬರಹದಿಂದ ತೊಡಗುತ್ತೇನೆ. ಅದಕ್ಕಾಗಿ ಕಾಯಿರಿ.

ನನ್ನಿ!

ಕಡತ ಸಾಗಣೆ ಒಡಂಬಡಿಕೆ - ೧

ಇದು ಹೆಣಿಕೆಗಳಲ್ಲಿ ಎಣಿಯಿಂದ ಎಣಿಗೆ ಕಡತಗಳನ್ನು ಸಾಗಿಸುವುದಕ್ಕಾಗಿ ಬಳಕೆಯಲ್ಲಿರುವ ಬಹಳ ಜನಪ್ರಿಯವಾದ ಒಡಂಬಡಿಕೆ. ಹಲವು ಹೆಣಿಕೆಯ ಒಡಂಬಡಿಕೆಗಳಂತೆ ಇದು ಕೊಳ್ವ-ಊಳಿಗಿ ಆಧಾರಿತ. ಕಸಾಒ ಟೀ.ಸೀ.ಪಿ/ ಅಯ್.ಪಿ (Transport control protocol - ಸಾರಿಗೆ ಒಡಂಬಡಿಕೆ, internet protocol - ಅಂತರ ಹೆಣಿಕೆ ಒಡಂಬಡಿಕೆ ) ಮೇಲೆ ನಡೆಯುತ್ತದೆ.

ಊಳಿಗಿಯು ೨೧ ನೇ ರೇವಿನಲ್ಲಿ ಕಿವಿಗೊಟ್ಟು ಕಸಾಒ ಕೊಳ್ವರಿಂದ ಒಳಬರುವ ಸಿಲುಕು ಕೋರಿಕೆಗಾಗಿ ಕಾಯುತ್ತದೆ. ಒಂದು ಕೊಳ್ವನಿಂದ ಬಂದ ಸಿಲುಕು ಕೋರಿಕೆಯನ್ನು ಊಳಿಗಿಯು ಸ್ವೀಕರಿಸಬೇಕು. ಆಗ ಕೊಳ್ವ ಹಾಗೂ ಊಳಿಗಿಯ ನಡುವೆ ಒಂದು ಸಿಲುಕು ಏರ್ಪಡುತ್ತದೆ. ಈ ಸಿಲುಕನ್ನು ಅಂಕೆಯ ಕಾಲುವೆ ಎನ್ನಲಾಗುತ್ತದೆ. ಏಕೆಂದರೆ ಇದರಲ್ಲಿ ಬರಿ ಕಸಾಒ ಅಪ್ಪಣೆಗಳು ಹಾಗೂ ಅವುಗಳ ಮಾರ್ನುಡಿಗಳು ಮಾತ್ರ ಹರಿಯುತ್ತವೆ. ನಿಜವಾದ ಮಾಹಿತಿ ಅಲ್ಲ. ಸಿಲುಕು ಸ್ವೀಕರಿಸಿದ ಕೂಡಲೆ, ಊಳಿಗಿಯು 'ಸಿಲುಕು ತೇರ್ಗಡೆ'ಯೆಂಬ ಸಂದೇಶವನ್ನು ಅದೇ ಸಿಲುಕು (ಕಾಲುವೆ) ಮೂಲಕ ತಿಳಿಸುತ್ತದೆ. ಇದಕ್ಕೆ ಕಸಾಒ ಮಾರ್ನುಡಿ ಎನ್ನುತ್ತಾರೆ. ಈಗ ಒಂದು ಕಸಾಒ ನೆರೆವು ಏರ್ಪಡುವುದಕ್ಕೆ ಕೊಳ್ವನು ಬಳಕೆಗಾರನ ಹೆಸರು ಹಾಗೂ ಅವನ ತೇರ್ಪದವನ್ನು ಊಳಿಗಿಗೆ ತಿಳಿಸಬೇಕು. ಕೊಳ್ವನು ಇದೇ ಕಾಲುವೆಯಲ್ಲಿ 'user' ಹಾಗೂ ಅದಾದ ಮೇಲೆ 'passwd' ಎಂಬ ಎರಡು ಅಪ್ಪಣೆಗಳ ಮೂಲಕ ಈ ಮಾಹಿತಿಯನ್ನು ಕೊಡುತ್ತದೆ. ಇವೆರಡೂ ಸರಿಯಿದ್ದು ಊಳಿಗಿಯಿಂದ ಸ್ವೀಕ್ರುತಗೊಂಡ ಮೇಲೆ ಕಸಾಒ ನೆರೆವು (FTP session) ತೊಡಗುತ್ತದೆ (ಪ್ರಾರಂಭ).

ಮಾಹಿತಿ ಕಳುಹಿಸಬೇಕಾದ್ದಲ್ಲಿ, ಒಂದು ಹೊಸ ಕಾಲುವೆಯನ್ನು (ಬೇರೊಂದು ರೇವಿನಲ್ಲಿ) ತೆರೆಯಲಾಗುತ್ತದೆ. ಅಂಕೆಯ ಕಾಲುವೆಯು, ನೆರೆವು ಮುಗಿಯುವವರೆಗೂ ಇರುತ್ತದೆ. ಆದರೆ ಮಾಹಿತಿ ಕಾಲುವೆಯನ್ನು ಮಾಹಿತಿಯ ಸಾಗಣೆಯಾದ ಕೂಡಲೇ ಮುಚ್ಚಲಾಗುತ್ತದೆ. ಮತ್ತೆ, ಅಂಕೆಯ ಕಾಲುವೆಯಲ್ಲಿ ಮಾಹಿತಿ/ ಕಡತ ಸಾಗಣೆಯ ಕೋರಿಕೆ ಹರಿದು ಬಂದಾಗ ಹೊಸ ಮಾಹಿತಿ ಕಾಲುವೆ ಏರ್ಪಡುತ್ತದೆ. ಸಾಗಣೆ ಮುಗಿದ ಕೂಡಲೇ ಮುಚ್ಚಲಾಗುತ್ತದೆ.

ಕಡತ ಸಾಗಣೆ ಒಡಂಬಡಿಕೆಯನ್ನು ಕೆಳಗಿನ ಚಿತ್ರದಲ್ಲಿ ಕೊಡಲಾಗಿದೆ.




ಒಬ:
ಒಡಂಬಡಿಕೆ ಬಗೆಗಾರ. ಊಳಿಗಿ ಇಲ್ಲವೇ ಕೊಳ್ವರ ಕಡೆಗಳಲ್ಲಿ ಒಡಂಬಡಿಕೆಯನ್ನು ಬಗೆದು ಕಡತ ಸಾಗಣೆಯನ್ನು ನಿಯಮಿಸುತ್ತದೆ. ಕೊಳ್ವ ಹಾಗೂ ಊಳುಗಿಗಳ ಒಬಗಳು ಬೇರೆ ಬೇರೆಯಾಗಿದ್ದು ಆಯಾ ಕಡೆಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ವಹಿಸುತ್ತವೆ.

ಊಳಿಗಿ ಒಬ (ಒಡಂಬಡಿಕೆ ಬಗೆಗಾರ) :
ಊಳಿಗಿ ಒಡಂಬಡಿಕೆ ಬಗೆಗಾರವು 21ನೇ ರೇವಿನಲ್ಲಿ ಕಿವಿಗೊಟ್ಟು ಕೇಳುತ್ತದೆ. ಕೊಳ್ವ ಒಬದಿಂದ ಸಿಲುಕು ಕೋರಿಕೆ ಬಂದಾಗ ಅದರೊಂದಿಗೆ ಸಿಲುಕನ್ನು ಸ್ಥಾಪಿಸುತ್ತದೆ. ಕೊಳ್ವ ಒಬದಿಂದ ಕಸಾಒ ಅಪ್ಪಣೆಗಳನ್ನು ಪಡೆದು, ಅದಕ್ಕೆ ಮಾರ್ನುಡಿಗಳನ್ನು ಕಳುಹಿಸಿ, ಉಳುಗಿ ಮಾಹಿತಿ ಸಾಗಣೆ ನಡೆಯನ್ನು ನಿಯಮಿಸುತ್ತದೆ.

ಊಳಿಗಿ ಮಾಸಾನ (ಮಾಹಿತಿ ಸಾಗಣೆ ನಡೆ):
ಊಳಿಗಿಯ ಎಡೆಯಲ್ಲಿ ಈ ನಡೆ ಅಥವಾ ನಡೆಗಳ ಗುಂಪು ಕೊಳ್ವ ಮಾಸಾನದ ಒಡನಾಡಿತನದೊಂದಿಗೆ ಕಡತಗಳ ಸಾಗಣೆ ಮಾಡುತ್ತದೆ.

ಕೊಳ್ವ ಒಬ (ಒಡಂಬಡಿಕೆ ಬಗೆಗಾರ):
ಕೊಳ್ವನ ಕಡೆಯಲ್ಲಿ ಒಡಂಬಡಿಕೆ ಬಗೆಗಾರ.

ಕೊಳ್ವ ಮಾಸಾನ (ಮಾಹಿತಿ ಸಾಗಣೆ ನಡೆ):
ಕೊಳ್ವನ ಕಡೆಯಲ್ಲಿ ಮಾಹಿತಿ ಸಾಗಣೆ ನಡೆ.

ಮುಂದಿನ ಬರಹದಲ್ಲಿ ಚುರುಕು ಕಸಾಒ (active FTP) ಹಾಗೂ ತೂಗು ಕಸಾಒ (passive FTP) ಬಗ್ಗೆ ಬರೆಯುವೆ.

----------------------------------------------------------------------------------------------------------

ಪದತಿಳಿವು (Glossary)


ಹೆಣಿಕೆ: network
ಎಣಿ: computer
ಕಡತ: file
ಕಡತ ಸಾಗಣೆ ಒಡಂಬಡಿಕೆ: file transfer protocol; ಒದಂಬಡಿಕೆ = protocol.
ಕೊಳ್ವ: client (ಬೆಲೆ ಕೊಟ್ಟು ಕೊಂಡುಕೊಳ್ಳುವ ಎಂಬ ಅರ್ಥದಿಂದ ಈ ಪದ ಬಳಸಿಲ್ಲ. ಕೊಳ್ ಎಂದರೆ ತೆಗೆದುಕೊಳ್ಳು, ಪಡೆ ಎಂಬ ಅರ್ಥ ಇದೆ. ಊಳಿಗ-ಸಿವೆಯನ್ನು ಪಡೆಯುವವ ಎಂಬ ಅರ್ಥದಲ್ಲಿ ಬಳಕೆ).
ಊಳಿಗಿ: server; ಊಳಿಗ = ಸೇವೆ =>ಕೊಳ್ವ-ಊಳಿಗಿ = client-server.
ಸಾರಿಗೆ ಒಡಂಬಡಿಕೆ: TCP (Transprot Control Protocol)
ಅಂತರಹೆಣಿಕೆ ಒಡಂಬಡಿಕೆ: IP (Internet Protocol)
ರೇವು: port
ಕಿವಿಗೊಡು: listen
ಸಿಲುಕು: conect (v), connection (n).
ಅಂಕೆ = control; ಅಂಕೆಯ ಕಾಲುವೆ= control channel.
ಅಪ್ಪಣೆ = command (n)
ಮಾರ್ನುಡಿ = reply; ಕಸಾಒ ಮಾರ್ನುಡಿ = FTP reply.
ಮಾಹಿತಿ = data, information (data ಪದಕ್ಕೆ ಸರಿಯಾದ ಪದ ನನಗೆ ಸಿಕ್ಕಿಲ್ಲ. ಸಿಕ್ಕರೆ ತಿಳಿಸಿ).
ನೆರೆವು = session.
ಬಳಕೆಗಾರ = user
ತೇರ್ಪದ = password
ಬಗೆ = interpret; ಬಗೆಗಾರ = interpreter.
ಒಡಂಬಡಿಕೆ ಬಗೆಗಾರ = protocol interpreter.
ನಡೆ = process; ಮಾಹಿತಿ ಸಾಗಣೆ ನಡೆ = data transfer process.
ಸಿಲುಕು ತೇರ್ಗಡೆ = connection successful
ಕೊಳ್ವನ ಕಡತ ಏರ್ಪಾಟು: client file system
ಊಳುಗಿಯ ಕಡತ ಏರ್ಪಾಟು: server file system