Monday, September 3, 2012

ಕನ್ನಡದಲ್ಲಿ ಹಮ್ಮುಗಾರಿಕೆ





ಇಂಗ್ಲೀಶ್ ನುಡಿ ಆಡುಗರು ಮತ್ತು ಬಲ್ಲವರು ಇಂಗ್ಲೀಶಲ್ಲೇ ಹಮ್ಮುಗಾರಿಕೆ ನಡೆಸುವಂತೆ ಕನ್ನಡಿಗರು ಕನ್ನಡದಲ್ಲೇ ಹಮ್ಮಲು ಆಗುತ್ತಾ? ನನಗೆ ತಿಳಿದ ಮಟ್ಟಿಗೆ ಕನ್ನಡ ನೆಲೆಯುಳ್ಳ ಒಂದು ಹಮ್ಮುಗಾರಿಕೆಯ ನುಡಿ ಇಲ್ಲ. ಆದರೆ ಇರುವ ಕೆಲವು ಇಂಗ್ಲೀಶಿನ ನೆಲೆಯ ಹಮ್ಮುಗಾರಿಕೆಯ ನುಡಿಗಳು, ಅದರಲ್ಲೂ ಇತ್ತೀಚಿನವು, ಯೂನಿಕೋಡ್ ಅನ್ನು ಬೆಂಬಲಿಸುತ್ತವೆ. ಅಂದರೆ ಮಾರ್ಪಡಬಲ್ಲಗಳು, ಕೆಲಸಗಳು, ಮತ್ತು ಬಗೆಗಳ ಹೆಸರುಗಳು ಕನ್ನಡದಲ್ಲಿ ಇರಬಹುದು.

ಹಳೆಯ ಹಮ್ಮುಗರಿಕೆಯ ನುಡಿಗಳಾದ ಸಿ, ಸಿ++ ಗಳಲ್ಲಿ ಇದು ಆಗದು. ಈ ನುಡಿಗಳು ಬರೀ ಆಸ್ಕಿಯನ್ನಶ್ಟೇ ಬೆಂಬಲಿಸುತ್ತವೆ. ಸೀ++ ನಲ್ಲಿ ಬರಿಗೆ-ಕಂತೆಯಲ್ಲಿ ಯೂನಿಕೋಡ್ ಬೆಂಬಲವಿದೆ. ಹಾಗಾಗಿ ಒಂದು ಹೆದೆಯಲ್ಲಿ ಕನ್ನಡವೂ ಸೇರಿದಂತೆ ಯಾವುದೇ ಯೂನಿಕೋಡ್ ಬರಿಗೆಗಳನ್ನು ಬಳಸಬಹುದು. ಆದರೆ ಈಚಿನ ನುಡಿಗಳಾದ ಜಾವ, ಸ್ಕಾಲ, ಪಯ್ತಾನ್ (೩ರ ಬಳಿಕ), ಸೀ ಶಾರ್ಪ್ ಗಳಲ್ಲಿ ಮೇಲೆ ಹೇಳಿದಂತೆ ಮಾರ್ಪಡಬಲ್ಲಗಳು, ಕೆಲಸಗಳು, ಮತ್ತು ಬಗೆಗಳ ಹೆಸರುಗಳೂ ಕನ್ನಡದಲ್ಲಿ ಇರಬಹುದು. ಹಾಗೆಯೇ, ಅನಿಸಿಕೆಗಳೂ ಕೂಡ ಕನ್ನಡದಲ್ಲಿರಬಹುದು. ಇದಕ್ಕೆ, ಜಾವಾದಲ್ಲಿ ಒಂದು ಎತ್ತುಗೆಯ ಹಮ್ಮುಗೆಯನ್ನು ನೋಡೋಣ:

// ಇದು ಕನ್ನಡದಲ್ಲಿ ಹಮ್ಮುಗಾರಿಕೆ ನಡೆಸುವ ಒಂದು ಎತ್ತುಗೆ
public class ಕನ್ನಡಎತ್ತುಗೆ {
  public static void main(String ಬಿತ್ತಿಗೆಗಳು[]) {
    int ಕೂಡಿ೧;
    int ಕೂಡಿ೨;
    int ಮೊತ್ತ;

    if (ಬಿತ್ತಿಗೆಗಳು == null || ಬಿತ್ತಿಗೆಗಳು.length <= 1) {
      System.out.println("ಸಾಕಶ್ಟು ಬಿತ್ತಿಗೆಗಳನ್ನು ಹಮ್ಮುಗೆಗೆ ನೀಡಲಾಗಿಲ್ಲ. ಹೊರಗೆ ಹೋಗುತ್ತಿದ್ದೇನೆ");
      System.exit(-1);
    }

    ಕೂಡಿ೧ = Integer.parseInt(ಬಿತ್ತಿಗೆಗಳು[0]);
    ಕೂಡಿ೨ = Integer.parseInt(ಬಿತ್ತಿಗೆಗಳು[1]);
    ಮೊತ್ತ = ಕೂಡಿ೧ + ಕೂಡಿ೨;
    System.out.println("ಒಟ್ಟು ಮೊತ್ತ: " + ಮೊತ್ತ);
  }
}

ಇದನ್ನು ಓಡಿಸಿದರೆ ಸಿಗುವ ಪಳಿ:
     ಬಿತ್ತಿಗೆಗಳನ್ನು ಹಮ್ಮುಗೆಗೆ ನೀಡಲಾಗಿಲ್ಲ. ಹೊರಗೆ ಹೋಗುತ್ತಿದ್ದೇನೆ

ಆದರೆ ೨ ಅಂಕಿಗಳನ್ನು ಬಿತ್ತಿಗೆಗಳನ್ನಾಗಿ ಕೊಟ್ಟರೆ ಏನು ಸಿಗುತ್ತೆ ನೋಡೋಣ:
     java ಕನ್ನಡಎತ್ತುಗೆ 1 2
     ಒಟ್ಟು ಮೊತ್ತ: 3



ಕೆಲವು ನುಡಿ ಆಡುಗರು ತಮ್ಮದೇ ನುಡಿಯ ನೆಲೆಯುಳ್ಳ ಹಮ್ಮುಗೆಯ ನುಡಿಗಳನ್ನು ಕಟ್ಟಿಕೊಂಡಿರುವುದುಂಟು. ಆದರೆ ಇವು ಹೆಚ್ಚು ಬಳಕೆಯಲ್ಲಿಲ್ಲ. ಕೆಲವಂತೂ ಬರೀ ಕಲಿಕೆಗಾಗಿ ಬಳಸಲಾಗುತ್ತಿವೆ. ರೂಬಿ (ಜಪಾನ್) ಮತ್ತು ಪಯ್ತಾನ್ (ನೆದರ್ಲ್ಯಾಂಡ್ಸ್) ನುಡಿಗಳು ಇಂಗ್ಲೀಶ್ ಆಡದ ನಾಡುಗಳಲ್ಲೇ ಹುಟ್ಟಿದರೂ ಇಂಗ್ಲೀಶ್ ನುಡಿಯ ನೆಲೆಯಲ್ಲೇ ಅವನ್ನು ಕಟ್ಟಲಾಯಿತು. ಆದರೆ ಇನ್ನೂ ಕಲಿಮನೆಯ ಮೊದಲನೇ ಇಲ್ಲವೇ ಎರಡನೇ ಹಂತದಲ್ಲಿರುವ ಇಂಗ್ಲೀಶ್ ಬಲ್ಲದ ಮಕ್ಕಳಿಗೆ ಹಮ್ಮುಗಾರಿಕೆಯನ್ನು ಕಲಿಸಲು ಅವರ ನುಡಿಯ ನೆಲೆಯಲ್ಲೇ ಹಮ್ಮುಗಾರಿಕೆಯ ನುಡಿಗಳನ್ನು ಪ್ರಪಂಚದ ಹಲವು ನಾಡುಗಳಲ್ಲಿ ಕಟ್ಟಿಕೊಂಡಿದ್ದಾರೆ. ಕನ್ನಡದಲ್ಲಿ ಇದು ಇನ್ನೂ ಆಗಬೇಕಿದೆ.

No comments: