Monday, March 2, 2009

ಸಿ ಹಮ್ಮುಗೆ - ೨

#include
main () {
   printf("Hello world\n");
}

ಮೊದಲನೇ ಸಾಲು #include. ಇದು stdio.h ಎಮ್ಬ ಕಣಜ(library)ವನ್ನು ಹಮ್ಮಿಗೆ (ಹಮ್ಮು: program) ಸೇರಿಸುತ್ತದೆ. ಅಂದರೆ ಈ ಕಣಜದಲ್ಲಿ ಗೊತ್ತುವಳಿ (definition) ಪಡಿಸಿರುವ ಕೆಲಸಗಳು (funtions) ಹಾಗೂ ಮಾರ್ಪಡಬಲ್ಲಗಳು (variables) ನಮ್ಮ ಹಮ್ಮಿನಲ್ಲಿ ಬಳಕೆಗೆ ದೊರಕುತ್ತವೆ. printf ಎಮ್ಬ ಅಚ್ಚುಮಾಡುವ ಕೆಲಸವೂ (funtion) ಇದೇ stdio.h ಕಣಜದಲ್ಲಿ ಗೊತ್ತುವಳಿಸಲಾಗಿದೆ. 

ಎರಡನೇ ಸಾಲು "ಮೇನ್" ಎಮ್ಬ ಕೆಲಸವನ್ನು ಗೊತ್ತುವಳಿ ಪಡಿಸುವ ಸಾಲು. main ಎಮ್ಬುದು ಈ  ಕೆಲಸದ ಹೆಸರು. ಎಲ್ಲ ಸಿ ಹಮ್ಮುಗಳಲ್ಲಿಯೂ ಒಂದು main ಕೆಲಸವಿರಬೇಕು. ಹಮ್ಮಿನ ಎಸಕವು (execution) mainಇಂದಲೇ ತೊಡಗುತ್ತದೆ.
ಅದರ ಪಕ್ಕ ಇರುವ ಸುತ್ತುಗಟ್ಟಿನಲ್ಲಿ  (bracket) ಕೆಲಸದ ಬಿತ್ತಿಗೆ(parameter - ಯಾಕೆ ಈ ಹೆಸರು ಅಂತ ಕೆಳಗೆ ಹೇಳಿದ್ದೀನಿ)ಗಳನ್ನು ನೀಡಬಹುದು. ಇಲ್ಲಿ mainಗೆ ಯಾವುದೇ ಬಿತ್ತಿಗೆಗಳಿಲ್ಲ. ಇದರ ಮುಂದಿರುವ ಹೂ ಸುತ್ತುಗಟ್ಟು (flower bracket) ಕೆಲಸದ ಮಯ್ಯನ್ನು ಪ್ರಾರಮ್ಬಿಸುತ್ತದೆ. 

ಮೂರನೇ ಸಾಲಿನಲ್ಲಿ "printf" ಎಮ್ಬ ಕೆಲಸವನ್ನು ಕರೆಯಲಾಗಿದೆ. ಈ ಕೆಲಸದ ಕರೆ(function call)ಗೆ "Hello World\n" ಎಮ್ಬ ಹೆದೆ(string)ಯನ್ನು ಬಿತ್ತಿಗೆ(parameter)ಯನ್ನಾಗಿ ನೀಡಲಾಗಿದೆ. ಅಂದರೆ ಈ ಹೆದೆ(string)ಯನ್ನು ಅದು ತೆರೆಯ ಮೇಲೆ ಅಚ್ಚು ಹಾಕುತ್ತದೆ. \n ಎಮ್ಬುದು ಹೊಸ ಸಾಲನ್ನು ಸೂಚಿಸುತ್ತದೆ. ಕೊನೆಯ ಸಾಲಿನಲ್ಲಿರುವ ಮುಚ್ಚುವ ಹೂ ಸುತ್ತುಗಟ್ಟು (closing flower bracket) main ಕೆಲಸದ ಕೊನೆಯನ್ನು ಸೂಚಿಸುತ್ತದೆ.

Glossary:
--------

ಕಣಜ : library
ಹಮ್ಮು: program
ಗೊತ್ತುವಳಿ: definition
ಗೊತ್ತುವಳಿಸು: define
ಕೆಲಸ: function
ಮಾರ್ಪಡಬಲ್ಲ: variable
ಸುತ್ತುಗಟ್ಟು: bracket
ಹೆದೆ: string
ಬಿತ್ತಿಗೆ: parameter. (parameter ಅಂದರೆ ಅದರ ಮೇಲೆ ಇನ್ನೊಂದರ ಪ್ರಮಾಣ ಇಲ್ಲವೇ ಬೆಲೆಯು ಮಾರ್ಪಡುತ್ತದೆ. ಅದಕ್ಕೆ ಬಿತ್ತು ಮೂಲದಿಂದ ಬಿತ್ತಿಗೆ ಎಮ್ಬ ಪದವನ್ನು ಬಳಸಿದ್ದೇನೆ).