ವಿಕ್ಶನರಿಯಲ್ಲಿ ಪದಗಳನ್ನು ಕಯ್ಯಾರೆ ಸೇರಿಸುತ್ತ ಸುಮಾರು ೬೦,೦೦೦ ಪದಗಳ ವರೆಗೂ ಗೆಳೆಯರು ಸೇರಿಸಿದ್ದರು. ಆಗ ಒಮ್ಮೆ ಒಟ್ಟಿಗೆ ಕುಳಿತು ಮಾತಾಡುವಾಗ ಕೆಲವು ಸುಳುವಾದ, ಒಂದೇ ತೆರನಾದ ಪದಗಳನ್ನು ಸೇರಿಸಲು ತನ್ನಡೆಸಿಕೆ (Automation) ಬಳಸಿದರೆ ಹೇಗೆ ಎಂಬ ಯೋಚನೆ ನಮಗೆ ಬಂತು. ಇಂಗ್ಲೀಶ್, ತಮಿಳು ಮುಂತಾದ ವಿಕ್ಶನರಿಗಳಲ್ಲಿ ಆಗಲೇ ಬಾಟ್ಗಳನ್ನು ಬಳಸುತ್ತಿದ್ದರು. ಕನ್ನಡದಲ್ಲಿ ಇಂತಹ ಯಾವುದೇ ಮೊಗಸು ನಾವು ಮಾಡಿರಲಿಲ್ಲ. ಅಲ್ಲದೇ, ತನ್ನಡೆಸಿಕೆಯಿಂದ ಕೆಲವು ಪದಗಳನ್ನು ನಾವು ಸೇರಿಸಬಲ್ಲೆವಾದರೆ ಅಂತಹ ಪದಗಳನ್ನು ಕಯ್ಯಾರೆ ಸೇರಿಸಲು ಕಶ್ಟವೇಕೆ ಪಡಬೇಕು? ಆ ಶ್ರಮವನ್ನು ತನ್ನಡೆಸಿಕೆಯಿಂದ ಸೇರಿಸಲಾಗದ, ಇಲ್ಲವೇ ಸೇರಿಸಲು ಕಶ್ಟವಾದ ಪದಗಳನ್ನು ಸೇರಿಸುವ ಕಡೆ ತಿರುಗಿಸಬಹುದು.
ಆಗ ನಮಗೆ ಬಂದ ಹೊಳಹು, ಹಲವೆಣಿಕೆ ಪದಗಳನ್ನು ತನ್ನಡೆಸಿಕೆಯಿಂದ ಸಲೀಸಾಗಿ ಸೇರಿಸಬಹುದೆಂದು. ವಿಕ್ಶನರಿಯಲ್ಲಿ ಆಗಲೇ ಇರುವ ಪದಗಳನ್ನು ಹುಡುಕುವುದು, ಮತ್ತು ಅವುಗಳ ಹಲವೆಣಿಕೆಯ ಪರಿಜು '-ಗಳು' ಇದ್ದರೆ ಅವನ್ನು ವಿಕ್ಶನರಿಗೆ ಸೇರಿಸುವುದು. ಎತ್ತುಗೆಗೆ, ವಿಕ್ಶನರಿಯ ಪದಗಳನ್ನು ಜಾಲಾಡುವಾಗ 'ಗಾಲಿ' ಎಂಬ ಪದ ಸಿಕ್ಕಿತೆಂದು ಇಟ್ಟುಕೊಳ್ಳೋಣ. ಇದರ ಹಲವೆಣಿಯ ಪರಿಜಾದ 'ಗಾಲಿಗಳು' ಎಂಬ ಪದವನ್ನು ವಿಕ್ಶನರಿಗೆ ಸೇರಿಸುವುದು.
ಇದನ್ನು ಮಾಡುವುದಕ್ಕೆ ನಾವು ಬಳಸಿದ್ದು, ವಿಕ್ಶನರಿ ಒದಗಿಸುವ ಮುಟ್ಟು ಹಮ್ಮುಗಾರಿಕೆಯ ಒಡನುಡಿ (Application Programming Interface). ಅದರಿಂದ ಹುಟ್ಟಿಕೊಂಡಿದ್ದು ನಮ್ಮ ಕನ್ನಡದ ಮೊದಲ ಬಾಟ್ 'ಗಳುಬಾಟ್'. ಸುಮಾರು ೩೦,೦೦೦ -ಗಳು,-ರು ಪದಗಳನ್ನು ಸೇರಿಸಲು ನಮಗೆ ನೆರವಾಯಿತು. ಮುಂದೆ ಅದೇ ಹಮ್ಮುಗೆಯನ್ನು ಬಳಸಿ, ಕೆಲವು ಮಾರ್ಪಾಡುಗಳನ್ನು ಮಾಡಿ ಹಲವು ಬಾಟ್ಗಳನ್ನು ಮಾಡಿದೆವು. ಅವುಗಳ ಬಗ್ಗೆ ಮುಂದಿನ ಬರಹದಲ್ಲಿ ತಿಳಿಸುತ್ತೇನೆ. ಹಾಗೆಯೇ ಇದಕ್ಕಾಗಿ ಬರೆದ ಜಾವಾ ಹಮ್ಮುಗೆಯ ಬಗ್ಗೆಯೂ ತಿಳಿಸುತ್ತೇನೆ.