![]() |
ತಿಟ್ಟ: ಟ್ವಿಟ್ಟರ್ |
ಟ್ವಿಟ್ಟರ್ ಇಲ್ಲವೇ ಫೆಸ್ಬುಕ್ಕುಗಳ ಎತ್ತುಗೆಯನ್ನು ತೆಗೆದುಕೊಳ್ಳೋಣ. ಹೊಸ ಸುದ್ದಿ (message) ಇಲ್ಲವೇ ಮತ್ತೇನಾದರೂ ಹೊಸದಿಕೆ(update)ಯನ್ನು ಹಂಚಿಕೊಳ್ಳಬೇಕಾದರೆ ಏನು ಮಾಡುತ್ತೀರಿ?
ನಿಮ್ಮ ಎಣಿ(computer)ಯನ್ನು ತೆಗೆದು, ನಡುಬಲೆ(Internet)ಗೆ ಸಿಲುಕಿಸಿ (connect), ಹೊರಳಿ(browser)ಯನ್ನು ತೆಗೆದು, ಬೇಕಾದ ತಾಣಕ್ಕೆ ಹೋಗಿ (ಫೇಸ್ಬುಕ್ / ಟ್ವಿಟ್ಟರ್) ಹೊಸದಿಕೆಯನ್ನು ಹಂಚಿಕೊಳ್ಳುತ್ತೀರಿ. ಆದರೆ ಹೀಗೆ ಎಣಿಯ ಮೂಲಕ ಮಾಡುವುದಕ್ಕೆ ಮನೆಯಲ್ಲೋ, ಅಳವೆಡೆ(office)ಯಲ್ಲೋ ಕುಳಿತಿರಬೇಕು. ಹಾಗಾದರೆ ಎಲ್ಲೋ ಹೀಗೇ ಪಯಣ ಕೈಗೊಂಡಾಗ ನಿಮ್ಮ ಬಗೆಯೊಳಗಿನ ಮಾತು ಹೇಳಿಕೊಳ್ಳಬೇಕೆನಿಸಿದಾಗ, ಪಯಣದಿಂದ ಹಿಂದಿರುಗುವ ವರೆಗೂ ಕಾಯಬೇಕಾ? ಕಂಡಿತ ಇಲ್ಲ, ಚೂಟಿಯುಲಿ(smart phone)ಗಳಿವೆ, ಅಲ್ಲವೇ? ಚೂಟಿಯುಲಿಗಳಿಂದ ನಡುಬಲೆಗೆ ಹೊಗಲು ೩ಜಿ ಊಳಿಗಗಳಿವೆ (services), ಮತ್ತು ಫೇಸ್ಬುಕ್ / ಟ್ವಿಟ್ಟರ್ ಮುಟ್ಟು(application)ಗಳಿವೆ.
ನೀವು ಮಾಡಬೆಕಾಗಿರಿವುದು ಇಷ್ಟೇ: ನಿಮ್ಮ ಚೂಟಿಯುಲಿಯಲ್ಲಿ ಫೇಸ್ಬುಕ್ ಮುಟ್ಟನ್ನು ತೆಗೆದು ಅದರಲ್ಲಿ ನಿಮ್ಮ ಹೊಸದಿಕೆಯನ್ನು ಅಚ್ಚಿಸಿ ಹಂಚಿಕೊಳ್ಳ ಬಹುದು, ಎಲ್ಲಿಂದಾದರೂ! ತೀರಾ ಸುಳುವು ಅಲ್ಲವೇ?
ಆದರೆ ಇದರಲ್ಲಿ ನಿಮ್ಮ ಕಣ್ಣಿಗೆ ಕಾಣಿಸದೆ ಹಿನ್ನೆಲೆಯಲ್ಲೇ ಕೆಲಸ ಮಾಡಿ ಇದೆಲ್ಲವನ್ನೂ ಸುಳುವಾಗಿ ನೆರವೇರಿಸಲು ಸಾದ್ಯವಾಗಿಸುವ ಒಂದು ತೀರಾ ಮುಕ್ಯವಾದ ಅಂಶವಿದೆ. ಅದೇ ಮುಟ್ಟು ಹಮ್ಮುಗಾರಿಕೆಯ ಒಡನುಡಿ (Application Programming Interface - API).
ಚೂಟಿಯುಲಿ, ೩ಜಿ ಊಳಿಗ - ಇವೆರಡೂ ಇದ್ದಲ್ಲಿ ಫೇಸ್ಬುಕ್ ತರದ ಊಳಿಗಗಳನ್ನು ಪಡೆಯಲು ನಿಮಗೆ ಬೇಕಾಗಿರಿವುದು ಮುಟ್ಟುಗಳು. ಮತ್ತು ಮುಟ್ಟುಗಳಿಗೆ ಬೇಕಾಗಿರುವುದು ಮುಟ್ಟು ಹಮ್ಮುಗಾರಿಕೆಯ ಒಡನುಡಿಗಳು. ಇವು ನಡುಬಲೆಯಲ್ಲಿ ಇಲ್ಲವೇ ಒಳಬಲೆಗಳಲ್ಲಿ (intranet) ಸಿಗಬಲ್ಲವಾದ್ದರಿಂದ ಬಲೆಯೂಳಿಗಗಳೆಂದೂ (web services) ಕರೆಯುವುದುಂಟು.
ಮು.ಹ.ಒ.ಗಳು (APIs) ಮುಟ್ಟುಗಳಿಗೆ ಯಾಕೆ ಬೇಕು ಮತ್ತು ಅವುಗಳನ್ನು ಬಳಸಿಕೊಂಡು ಮುಟ್ಟುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಮುಂದಿನ ಬರಹದಲ್ಲಿ ಬರೆಯುತ್ತೇನೆ.